ತ್ಯೇರ್, ಲೂಯಿ ಅಡಾಲ್ಫ್
	1797-1877. ಫ್ರೆಂಚ್ ರಾಜಕಾರಣಿ, ಇತಿಹಾಸಕಾರ, ಪತ್ರಿಕೋದ್ಯಮಿ. 1797ರ ಏಪ್ರಿಲ್ 15ರಂದು ಮಾರ್ಸೇನಲ್ಲಿ ಹುಟ್ಟಿದ. 1818ರಲ್ಲಿ ವಕೀಲ ವೃತ್ತಿಗಿಳಿದು ಅದನ್ನು ಬಹು ಬೇಗ ತ್ಯಜಿಸಿ 1821ರಲ್ಲಿ ಪ್ಯಾರಿಸ್ಸಿಗೆ ಬಂದು ಅಲ್ಲಿ ಕಾನ್‍ಸ್ಟಿಟ್ಯೂಷನಲ್ ಎಂಬ ಪತ್ರಿಕೆಗಾಗಿ ಕೆಲಸ ಮಾಡತೊಡಗಿದ. 1823-27ರ ಅವಧಿಯಲ್ಲಿ ಫ್ರಾನ್ಸಿನ ಕ್ರಾಂತಿಯ ಇತಿಹಾಸವನ್ನು ಕುರಿತ ಹತ್ತು ಸಂಪುಟಗಳ ದೀರ್ಘಕೃತಿಯನ್ನು ಬರೆದ. 1830ರಲ್ಲಿ 10ನೆಯ ಚಾಲ್ರ್ಸನ ಸರ್ಕಾರವನ್ನು ಟೀಕಿಸುವ ಉದ್ದೇಶದಿಂದ ನ್ಯಾಷನಲ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ. ಜುಲೈ ಕ್ರಾಂತಿಗೆ ಈ ಪತ್ರಿಕೆಯ ಟೀಕೆಗಳು ಸಾಕಷ್ಟು ಪ್ರಚೋದನೆ ನೀಡಿದವು. ಕ್ರಾಂತಿಯ ಅನಂತರದ ಲೂಯಿ ಫಿಲಿಪ್ ಸರ್ಕಾರದಲ್ಲಿ ತ್ಯೇರ್ ವಿವಿಧ ಅಧಿಕಾರ ಸ್ಥಾನಗಳಲ್ಲಿದ್ದ. 1832ರಲ್ಲಿ ಒಳಾಡಳಿತ ಸಚಿವನಾಗಿ. 1836 ಮತ್ತು 1846ರಲ್ಲಿ ಪ್ರಧಾನ ಮಂತ್ರಿಯಾಗಿ ನೇಮಕವಾದ. ತುಂಬ ಮಹತ್ವಾಕಾಂಕ್ಷಿಯಾಗಿದ್ದ ಈತ ಮತ್ತೆ ಬರವಣಿಗೆಯಲ್ಲಿ ತೊಡಗಿದ. 1845-62ರ ಅವಧಿಯಲ್ಲಿ ನೆಪೋಲಿಯನ್ ಕಾಲಕ್ಕೆ ಸಂಬಂಧಪಟ್ಟಂತೆ ಅವಧಿಯ 19 ಸಂಪುಟಗಳ ದೀರ್ಘ ಇತಿಹಾಸವನ್ನು ರಚಿಸಿದ. 1851-52ರಲ್ಲಿ ಈತನನ್ನು ದೇಶದಿಂದ ಉಚ್ಛಾಟಿಸಲಾಗಿತ್ತು. 1863ರ ವರೆಗೂ ಈತ ರಾಜಕೀಯದಿಂದ ದೂರವಿದ್ದು ಬರೆವಣಿಗೆಯಲ್ಲೇ ನಿರತನಾಗಿದ್ದ. 3ನೆಯ ನೆಪೋಲಿಯನ್ನನ ಪತನಾನಂತರ 1863ರಲ್ಲಿ ಇವನು ಮತ್ತೆ ಅಸೆಂಬ್ಲಿಗೆ ಚುನಾಯಿತನಾಗಿ ಅದರ ಅಧ್ಯಕ್ಷನೂ ಆಗಿದ್ದ. 1871ರ ವರೆಗೂ ವಿರೋಧ ಪಕ್ಷದ ನಾಯಕನಾಗಿದ್ದ. 1873ರಲ್ಲಿ ಸಭೆಗೆ ರಾಜೀನಾಮೆ ಕೊಡಬೇಕಾಗಿ ಬಂದು ರಾಜಕೀಯದಿಂದ ಪೂರ್ಣ ನಿವೃತ್ತಿ ಪಡೆದ. ಈತ ತೀರಿಕೊಂಡದ್ದು 1877ರ ಸೆಪ್ಟೆಂಬರ್ 3ರಂದು, ಪ್ಯಾರಿಸ್ಸಿನಲ್ಲಿ.

	19ನೆಯ ಶತಮಾನದ ಫ್ರಾನ್ಸಿನ ಇತಿಹಾಸದಲ್ಲಿ ತ್ಯೇರನದು ಬಹು ದೀರ್ಘ ಹಾಗೂ ಪ್ರಮುಖ ಪಾತ್ರವಾಗಿತ್ತು. ಈತನ ಎರಡು ಮಹಾಕೃತಿಗಳೂ ಸಮಕಾಲೀನ ಇತಿಹಾಸದ ಮೇಲೆ ಪ್ರಭಾವ ಬೀರಿದುವು. ನೆಪೋಲಿಯನ್ ಕಾಲಕ್ಕೆ ಸಂಬಂಧಪಟ್ಟಂತೆ ಕಾಲವನ್ನು ಕುರಿತ ಹಿಸ್ಟೊರಿ ಡು ಕಾನ್ಸುಲೇಟ್ ಎಟ್ ಡ ಲ ಎಂಪೈರ್ ಗ್ರಂಥ ಇವನ ಜೀವಿತ ಕಾಲದಲ್ಲೇ ಅನೇಕ ಮುದ್ರಣಗಳನ್ನು ಕಂಡಿತು. ಮೂಲ ಫ್ರೆಂಚ್ ಸಂಪುಟಗಳು ಪ್ರಕಟವಾದಂತೆ ಅವುಗಳಲ್ಲಿ ಕೆಲವು ಇಂಗ್ಲಿಷಿಗೂ ಅನುವಾದವಾದುವು. (1846-62) ಆದರೆ ಈಗ ಈ ಗ್ರಂಥದ ಮಾನ್ಯತೆ ಕಡಿಮೆಯಾಗಿದೆ. ಆಳವಿಲ್ಲದ ಅಭ್ಯಾಸ, ಅತಿವಿಸ್ತಾರ, ಅನಗತ್ಯ ವಿವರಗಳೇ ಈ ಕೃತಿಯಲ್ಲಿ ಹೆಚ್ಚು. ಅಂದಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಈತ ಏನನ್ನೂ ಬರೆದಿಲ್ಲ. ಆದರೆ ಆಡಳಿತದ ಬಗ್ಗೆ ಮಾತ್ರ ಸಾಕಷ್ಟು ವಿವರಗಳನ್ನು ಕೊಡುತ್ತಾನೆ.

	ಈತ ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣಗಳನ್ನು ಇವನ ಮರಣಾನಂತರ 19 ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ